<div style="background:#ffffed">
<ನಳಚರಿತ್ರೆ
ಕನಕದಾಸ ವಿರಚಿತ ನಳಚರಿತ್ರೆ (ಸಂಗ್ರಹ)
(ಮೂಲದೊಂದಿಗೆ ಪರಿಶೀಲಿಸತಕ್ಕದ್ದು)
ಶ್ರೀ
ಒಂದನೆಯ ಸಂಧಿ.

ಒಂದನೆಯ ಸಂಧಿ.
ಶ್ರೀರಮಣ ಸರಸಿಜದಳಾಕ್ಷ ಮು 
ರಾರಿ ಸಚರಾಚರಭರಿತ ದುರಿ 
ತಾರಿ ನಿತ್ಯಾನಂದ ನಿರ್ಜರನಿಕರದಾತಾರ 
ವಾರಿಜಾಂಬಕ ವರಗುಣಾಶ್ರಯ 
ಮಾರಪಿತ ವೇದಾಂತನುತ ಸಾ 
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ ||೧||

ಕರಿವದನ ಹೇರಂಬ ಲಂಬೋ 
ದರ ಗಣಾಧಿಪ ಮೋದಕಪ್ರಿಯ 
ಪರಶು ಪಾಶಾಂಕುಶರಾಂಕಿತದಿಂದ ರಂಜಿಸುವ 
ಸುರನರೋರಗನಮಿತ ಗೌರೀ 
ವರಕುಮಾರಕ ವಿದ್ಯೆವಾರಿಧಿ 
ವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ ||೪||

ನಾರಿ ನಳಿನದಳಾಕ್ಷಿ ವರ ಜಂ 
ಭಾರಿನುತೆ ಚತುರಾನನಪ್ರಿಯೆ 
ಭೂರಿಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ
ನೀರೆ ನಿಗಮವಿಚಾರೆ ಘನಶೃಂ 
ಗಾರೆ ಭಕ್ತರಿಗೊರವ ಕೊಡುವ ಉ 
ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ ||೫||

ರಾಯರೊಳಗ್ಗಳೆಯನಾಕೌಂ 
ತೇಯನಿಗೆ ರೋಮಶಮಹಾಮುನಿ 
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು 
ಶ್ರೀಯರಸ ವರಪುರದ ಚೆನ್ನಿಗ 
ರಾಯನಂಕಿತಮಾಗಿ ಪೇಳುವೆ 
ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ ||೬||

ಜನಪ ಕುರುಭೂಪಾಲನೊಳು ಜೂ 
ಜಿನಲಿ ರಾಜ್ಯವ ಸೋಯು ಯಮನಂ 
ದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆ 
ವನಿತೆ ಧೌಮ್ಯಮುನೀಂದ್ರ ಮಂತ್ರೀ 
ಜನಸಹಿತ ನಡೆತಂದು ಕಾಮ್ಯಕ 
ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ ||೮||

ಧರಣಿಪತಿ ಚಿಂತಿಸುತ ಹಲುಬಿದ 
ನರನ ಹದನೇನೆಂದು ತಪದಲಿ 
ಮರೆದು ಕಳೆದನೊ ನಮ್ಮನಿಬರನೆನುತಲಿರಲಂದು 
ಸರಪ ಕಳುಹಿದ ರೋಮಶನು ಮುನಿ 
ವರನು  ಗಡಣದೊಳೆಯ್ದಿ ರವಿಭಾ 
ಸುರಸುತೇಜದೊಳಂದು ಕಾಮ್ಯಕ ವನಕೆ ನಡೆತಂದ ||೯||

ಅರಸನನುಜರು ಸಹಿತ ಮುನಿಮು 
ಖ್ಯರನು ಕಂಡಿದಿರೆದ್ದು ಚರಣದೊ 
ಳೆರಗಿ ಬಿಜಯಂಗೈಸಿ ತಂದನು ತಳಿರ ಮಂಟಪಕೆ 
ವರಮುನೀಂದ್ರರಿಗರ್ಘ್ಯಪಾದ್ಯೋ 
ತ್ಕರದೊಳುಪಚರಿಸುತ್ತ ದರ್ಭಾ
ಸ್ತರಣದಲಿ ಕುಳ್ಳಿರಿಸಿದನು ಭಯಭರಿತಭಕ್ತಿಯಲಿ ||೧೦||

ಧರಣಿಪತಿ ಸುಕ್ಷೇಮವೇ ನಿಜ 
ತರುಣಿ ನಿನ್ನನುಜಾತತನಯರು 
ವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳು 
ಪರಿಣತರೆ ಪೇಳೆನಲು ನಿಮ್ಮಯ 
ಪರಮ ಕರುಣಾಮೃತವೆ ನಮ್ಮನು 
ಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ  ||೧೩||

ಧಾರಿಣಿಯ ನೆರೆ ಸೋತು ಅನುಜರು 
ವಾರಿಜಾನನೆ ಸಹಿತ ಬಂದೀ 
ಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿ 
ಸೇರಿ ಹತಸುಖರಾಗಿ ಬಳಲಿದ 
ರಾರು ಧರಿಯೊಳಗೆನ್ನವೊಲು ಭವ 
ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ ||೧೪||

ಎಲೆ ಮಹೀಪತಿ ನೀನಿನಿತು ಉ 
ಮ್ಮಳಿಸಲೇಕರಸುಗಳು ಪೂರ್ವದ 
ನಳ ಹರಿಶ್ಚಂದ್ರಾದಿ ರಾಘವನೃಪರು ಹಳುವದಲಿ 
ಲಲನೆಯರ ತಾವಗಲಿ ಕಷ್ಟವ 
ಬಳಸಿದರು ಅವರಂತೆ ನಿನಗುಪ 
ಟಳಗಳುಂಟೆ ಬರಿದೆ ಮನನೋಯದಿರು  ನನೀನೆಂದ ||೧೫||

ಪರಮ ಋಷಿಗಳ ನೆರವಿಯೇ ಸಭೆ 
ಹರಿಯ ಕಾರುಣ್ಯಾಂಬುಧಿಯೆ ಸಿರಿ 
ನರವೃಕೋದರ ಮಾದ್ರಿತನಯರು ನಿನಗೆ ಬಾಹುಬಲ 
ತರುಣಿಯೇ ಭೋಗೈಕಸಂಪ 
ತ್ತುರುತರದ ವನರಾಜ್ಯ ನಿನಗಿಂ 
ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ ||೧೬||

ಆದಡೆಲೆ ಮುನಿನಾಥ ನಳನೃಪ 
ಮೇದಿನಿಯನುಳಿದವನಿಯಲಿ ತ 
ಳೋದರಿಯನೆಂತಗಲಿದನು ತಾನಾರ ದೆಸೆಯಿಂದ 
ಸಾಧಿಸಿದನವನಿಯನು ಧರೆಯೆಂ
ತಾದುದಾ ನಳನೃಪಗೆ ನೀವಿದ 
ನಾದರಿಸಿ ಪೇಳೆನಲು ನಗುತಿಂತೆಂದನಾ ಮುನಿಪ ||೧೭||

ವಸುಧೆಪತಿ ಕೇಳೀ ಚರಿತ್ರೆಯ 
ನಿಷಧವೆಂತೆಂಬಾ ಮಹಾಪುರ 
ವೆಸೆದುದಗಣಿತ ಗೋಪುರ ಪ್ರಾಕಾರಶಿಖರದಲಿ 
ಮಿಸುನಿ ರತ್ನಪ್ರಭೆಗಳಲಿ ರಂ 
ಜಿಸುವ ದೇವಾಲಯಗಳಿರ್ದುದು 
ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ ||೧೯||

ಭೂರಮಣ ಕೇಳಾ ಪುರಾಧಿಪ 
ವೀರಸೇನನೃಪಾಲ ರಿಪುಸಂ 
ಹಾರನಾತನ ತನಯ ನಳನೃಪನೆಂಬುದಭಿಧಾನ 
ಭೂರಿವಿಕ್ರಮ ಪರಮಧರ್ಮವಿ 
ಚಾರ ಶಶಿಕುಲಮೌಳಿ ಘನಗಂ 
ಭೀರ ಪಾಲಿಸುತಿರ್ದ ಸಪ್ತದ್ವೀಪದವನಿಪರರ ||೨೫||

ಭೂಮಿಪತಿ ಕೇಳಿತ್ತಲುತ್ತರ
ಭೂಮಿಯಲಿ ಪಜ್ಜಳಿಸುತಿಹ ಸು 
ತ್ರಾಮಪುರದಂತೆಸೆದುದಲ್ಲಿ ವಿದರ್ಭನಗರವದು 
ರಾಮಣೀಯಕರಚನೆಯಲಿ ನವ 
ಹೇಮಖಚಿತ ಸುರತ್ನಸೌಧ 
ಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ ||೨೭||

ಅಲ್ಲಿಗಧಿಪತಿ ಭೀಮನೃಪ ಗುಣ 
ದಲ್ಲಿ ನಯದಲಿ ವೀರ್ಯವಿತರಣ 
ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ 
ಬಲ್ಲಿದನು ತಾನಾಗಿ ನಿಜಸುತ 
ರಿಲ್ಲವೆಂದುಮ್ಮಳಿಸುತಿರೆ ಮನ 
ದಲ್ಲಿಗಾಕ್ಷಣ ಬಂದನಾ ದಮನಾಖ್ಯಮುನಿವರನು ||೨೮||

ಬಂದ ಮುನಿಗವನಿಪತಿ ವಂದಿಸಿ 
ನಿಂದು ಕರಗಳ ಮುಗಿದು ವಿನಯದೊ 
ಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದು 
ನೊಂದನುಡಿಯಲು ಸುತರ ಪಡೆಯದ 
ತಂದೆಗಿದು ಸಂತಾಪವಲ್ಲವೆ 
ಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ ||೨೯||

ಯೋಗದೃಷ್ಟಿಯೊಳರಿದು ಮುನಿವರ 
ನಾಗ ನೃಪನೊಡನೆಂದ ಪುತ್ರನ 
ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ 
ಆ ಗರುವ ಮುನಿಮಂತ್ರದಿಂದ ಸ 
ರಾಗದಲಿ ಶುಭದಿನ ಸುಲಗ್ನದಿ 
ಯಾಗವನು ಪೂರೈಸಿದನು ಸುರನರರು ತಣಿವಂತೆ||೩೦||

ಅರಸ ಕೇಳಾ ಯಾಗಸಮನಂ 
ತರದೊಳಾ ಮುನಿಮುಖ್ಯರನು ಸ 
ತ್ಕರಿಸಿ ಕಳುಹಿದನವರವರನುಚಿತೋಪಚಾರದಲಿ 
ತರುಣಿಗಾದುದು ಗರ್ಭ ಮಂಗಳ 
ಕರ ಸುಲಗ್ನ ಸುತಾರೆಯಲಿ ನೃಪ 
ನರಸಿ ಪಡೆದಳು ತಷನುಜೆಯನು ಲೋಕೈಕಸುಂದರಿಯ ||೩೧||

ಅಮರದುಂದುಭಿ ಮೊಳಗಲಿಳೆ ಸಂ
ಭ್ರಮಿಸೆ ಪುರಜನ ನಲಿಯೆ ನೃಪನಾ 
ಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆ 
ವಿಮಲನಾಮವ ಪಾಲಿಸೆನಲಾ 
ಕಮಲಮುಖಿ ದಮಯಂತಿಯೆಂದು 
ತ್ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ ||೩೨||

ನಿರಿಗುರುಳ ಪವಳಾಧರದ ಉರು 
ತರದ ತೋಳ್ಗಳ ಕಂಬುಕಂಠದ 
ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ 
ಹರಿಯ ಮಧ್ಯದ ಹಂಸಗಮನದ 
ಗುರುಕುಚದ ಕರಪಲ್ಲವದ ಸರ 
ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲಿ ||೩೩||

ಗುಣದೊಳಗೆ ಶೀಲದಲಿ ಮಾತಿನ 
ಭಣಿತಿಯಲಿ ಗಾಂಭೀರ್ಯದಲಿ ವಿತ 
ರಣದಲನುಪಮವಿದ್ಯೆಯಲಿ ಗುರು ದೈವವಭಕ್ತಿಯಲಿ 
ಪ್ರಣಿತಿಸಲು ಶರ್ವಾಣಿ ರತಿಯರಿ 
ಗೆಣೆಯೆನಿಪ ಸುಂದರಿಗೆ ಸರಿಯೆ ಲೋಕದೊಳೆಂದನಾ ಮುನಿಪ ||೩೪||

ಕೇಳು ಪಾಂಡವತನಯ ಭೀಮನೃ 
ಪಾಲನೋಲಗದಲ್ಲಿ ಧರಣೀ 
ಪಾಲಕರರ ಚರಿತಪ್ರಸಂಗದೊಳಿರಲು ನಳನೃಪನ 
ಶೀಲವನು ಸೌಂದರ್ಯವಿಭವ ವಿ 
ಶಾಲಮತಿ ಲಾವಣ್ಯರೂಪು ಗು 
ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು ||೩೫||

ವನಜಮುಖಯಾ ವಾರ್ತೆಯೆಲ್ಲವ
ಮನವೊಲಿದು ಕೇಳಿದಳು ಹಿಗ್ಗುತ 
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ 
ನೆನೆದು ಬರೆದಳು ನಳನ ರೂಪವ 
ನನುನಯದಿ ಚಿತ್ರದಲಿ ಮಿಗೆ ಸಂ 
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ ||೩೬||

ಆಗ ಮದನನು ತನ್ನ ಬಲವನು 
ಬೇಗದಲಿ ಜೋಡಿಸಲು ಖೋಯೆಂ 
ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ 
ಕೋಗಿಲೆಗಳಾರ್ಭಟಿಸೆ ಗಿಳಗಳು 
ಕೂಗೆ ನವಿಲುಗಳಾಡೆ ಮನ್ಮಥ 
ನಾಗ  ಪೂಗಣೆಗಳನು ಸಂಧಿಸಿಯೆಚ್ಚನಂಗನೆಯ ||೩೭||

ಉಣ್ಣಳನ್ನವ ಕಾಮಗತ್ತಲೆ 
ಕಣ್ಣಿನಲಿ ಪೆರ್ಚಿದುದು ಸತಿಯರ 
ಮನ್ನಣೆಗೆ ಮೈಗೊಡಳು ಬಲುಬೇಸರದಿ ಬಳಲುವಳು 
ಬಣ್ಣಿಸಿಯೆ ಮಾತಾಡಲೊಲ್ಲಳು 
ಬಣ್ಣಗುಂದಿದ ದೇಹದೊಳಗೆಳ 
ವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ ||೩೮||

ಈ ಪರಿಯೊಳಾ ಕಾಮಿನಿಗೆ ಶೈ 
ತ್ಯೋಪಚಾರವ ಮಾಡಿದರು ಪರಿ 
ತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತ 
ಚಾಪಳೆಯರಾಲೋಚಿಸುತ ಕಡು 
ಪಾಪಿಯಂಗಜನೆಂದು ಬಯ್ಯುತ 
ತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸಿ ||೪೧||

---@@---

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ